ಭೂಆಕೃತಿವಿಜ್ಞಾನ - 
 	ಭೂಮಿಯ ಅನುಷಂಗಿಕ ಮೇಲ್ಮೈಲಕ್ಷಣಗಳ ಉಗಮ ಕುರಿತ ವೈಜ್ಞಾನಿಕ ಅಧ್ಯಯನ (ಜಿಯೊಮಾರ್ಫಾಲಜಿ). ಪ್ರಾಥಮಿಕ ಧಾತುಗಳಲ್ಲಿ ಕಂಡುಬರುವ ಕ್ಷಯಗಳಿಂದ (ಇರೋಶನ್ - ಸವಕಳಿ) ಮತ್ತು ಕ್ಷಯಾವಶೇಷಗಳ ರಾಶಿರೂಪಣೆಗಳಿಂದ ಇವು ಕಂಡುಬರುತ್ತವೆ. ಈ ಅಧ್ಯಯನ ಮಾಡುವ ಸಲುವಾಗಿ ಸುಮಾರು 19ನೆಯ ಶತಮಾನದ ಪ್ರಾರಂಭದಲ್ಲಿ ಎರಡು ಬಗೆಯ ಸಂಶೋಧನಾ ವಿಧಾನಗಳನ್ನು ಅನುಸರಿಸಲಾಯಿತು. ಭೂಮಿಯ ಮೇಲ್ಮೈಲಕ್ಷಣಗಳ ವರ್ಣನೆಗಳನ್ನು ಕುರಿತದ್ದು ಮೊದಲನೆಯ ವಿಧಾನ. ಭೂಆಕೃತಿ ವಿಜ್ಞಾನದ ಪ್ರಾಯೋಗಿಕ ಅಧ್ಯಯನ ಕುರಿತದ್ದು ಎರಡನೆಯದು. ಮೊದಲನೆಯ ವಿಧಾನವನ್ನು ಪ್ರಧಾನವಾಗಿ ಬ್ರಿಟನ್ ಮತ್ತು ಅಮೆರಿಕಗಳಲ್ಲಿ ಅಲ್ಲಿಯ ಭೂಗೋಳ ಶಾಸ್ತ್ರಜ್ಞರು ಅನುಸರಿಸುತ್ತಿದ್ದರು. ಎರಡನೆಯ ವಿಧಾನದ ಅಧ್ಯಯನವನ್ನು ಫ್ರಾನ್ಸಿನಲ್ಲಿ ಜಿಯೊಲಾಜಿಕ್ ಡೈನಾಮಿಕ್ ಎಂಬ ಹೆಸರಿನಡಿಯಲ್ಲಿ ನಡೆಸಲಾಗುತ್ತಿತ್ತ್ತು.

	ಭೂಮಿಯ ಮೇಲ್ಮೈಲಕ್ಷಣಗಳು ಕೇವಲ ಕೆಲವೇ ಪ್ರಮುಖ ಶಕ್ತಿಗಳ ಕಾರ್ಯಗಳಿಂದ ರೂಪುಗೊಂಡಂಥವು ಎಂಬ ವಾದವನ್ನು ಡಬ್ಲ್ಯು.ಎಮ್. ಡೇವಿಸ್ ಎಂಬವ ಪ್ರತಿಪಾದಿಸಿದ. ಈತನ ಕ್ಷಯ ಚಕ್ರ (ಇರೋಶನ್ ಸೈಕಲ್) ಪರಿಕಲ್ಪನೆ ಬಲು ಜನಪ್ರಿಯತೆಗಳಿಸಿತು. ಇದರ ಹಿನ್ನೆಲೆಯ ತತ್ತ್ವ ಮೂಲತಃ ವರ್ಣನಾತ್ಮಕವಾಗಿ ಉಳಿಯಿತೇ ವಿನಾ ಭೂಇತಿಹಾಸದ ಉಗಮವನ್ನು ವಿವರಿಸುವಲ್ಲಿ ಯಶಸ್ವಿ ಆಗಲಿಲ್ಲ.

	ಭೂಮಿಯ ಮೇಲ್ಮೈಲಕ್ಷಣಗಳನ್ನು ಕುರಿತಾದ ಅಧ್ಯಯನದಲ್ಲಿ ಭೂಕಾರ್ಯ ಕರ್ತೃಗಳೆನಿಸಿರುವ ನದಿ, ನೀರ್ಗಲ್ಲುಪ್ರವಾಹ ಮುಂತಾದವು ಪ್ರಕೃತಿಯಲ್ಲಿ ನಡೆಸುವ ಕಾರ್ಯವಿಧಾನಗಳು ಸೇರಿವೆ. ಭೂಮಿಯ ಮೇಲಿನ ವಿವಿಧ ವಸ್ತುಗಳ ಮೇಲೆ ನಡೆಸುವ ಪ್ರಕ್ರಿಯೆಗಳು, ಆ ವಸ್ತುಗಳ ಭೌತಗುಣಗಳು, ಅವುಗಳ ಉಪಯೋಗಗಳು ಹಾಗೂ ಅವುಗಳ ನಡುವಿನ ಪರಸ್ಪರ ಸಂಬಂಧಗಳು ಮೊದಲಾದವನ್ನು ಕುರಿತಂತೆ ಅಧ್ಯಯನ ನಡೆದಿದೆ. ಇವಲ್ಲದೆ ಸಾಗರ ತಳಗಳಲ್ಲಿಯ ಮೇಲ್ಮೈ ಲಕ್ಷಣಗಳು, ಅಲ್ಲಿಯ ಕ್ರಿಯೆಗಳು, ಸವೆತದ ಗತಿ, ಸಂಚಯನಗಳು ಹಾಗೂ ಅವುಗಳ ಕರ್ತೃಗಳ ಚಟುವಟಿಕೆಗಳು ಇವನ್ನು ಕುರಿತಂತೆಯೂ ಭೂಆಕೃತಿವಿಜ್ಞಾನದಲ್ಲಿ ಅಧ್ಯಯನ ನಡೆಸುವುದಿದೆ. ಮೊದಲ ಬಾರಿಗೆ ಈ ವಿಜ್ಞಾನವಿಭಾಗ ಕೇವಲ ಒಂದು ವರ್ಗೀಕರಣ ವಿಜ್ಞಾನ ಅಥವಾ ಪ್ರಕೃತಿಯ ಇತಿಹಾಸವನ್ನು ಕುರಿತ ವಿಜ್ಞಾನವಾಗಿ ಪ್ರಾರಂಭವಾದದ್ದು ಕ್ರಮೇಣ ಭೂಮಿಯ ಎಲ್ಲ ಬಗೆಯ ಭೂಆಕೃತಿಗಳಿಗೂ (ಲ್ಯಾಂಡ್ ಫಾರಮ್ಸ್) ಅನ್ವಯಿಸುವ ಮತ್ತು ತತ್ತ್ವರೂಪದಲ್ಲಿ ನಿರೂಪಿತವಾಗುವ ವಿಜ್ಞಾನರಾಶಿಯಾಗಿ ಬೆಳೆದಿದೆ.

	ಪೂರ್ವೇತಿಹಾಸ: ಗ್ರೀಕರು, ರೋಮನ್ನರು ಮತ್ತು ಅರಬ್ಬರು ಭೂಆಕೃತಿಗಳ ರಚನೆಗೆ ಪೂರಕವಾದ ಪ್ರಕ್ರಿಯೆಗಳನ್ನು ಬಲು ಹಿಂದೆಯೇ ಗುರುತಿಸಿದ್ದರು. ಅವರ ಅಭಿಪ್ರಾಯಗಳು ಅನಂತರ ನಡೆದ ಭೂಆಕೃತಿವಿಜ್ಞಾನದ ಅಧ್ಯಯನಗಳ ಮೇಲೆ ಅಂಥ ಪರಿಣಾಮವನ್ನೇನೂ ಬೀರಲಿಲ್ಲ. ಬದಲಿಗೆ ಭೂಆಕೃತಿಗಳನ್ನು ಕುರಿತಂತೆ ಅಧ್ಯಯನಕ್ಕೆ ಉತ್ತೇಜನ ನೀಡಿದುವು. ಆಗಿನ ಕಾಲಕ್ಕೆ ಭೂಆಕೃತಿ ವಿಜ್ಞಾನವನ್ನು ಕುರಿತಂತೆ ಭೂಪ್ರಕ್ರಿಯೆಗಳ ಬಗೆಗೆ ಇತರರೂ ಪ್ರಸ್ತಾವಿಸಿದ್ದರು. ಉದಾಹರಣೆಗೆ ಇಟಲಿಯ ಲಿಯೊನಾರ್ಡೋ ಡ ವಿಂಚಿ (1452-1519). ಜರ್ಮನಿಯ ಅಗ್ರಿಕೋಲ (1494-1555) ಮತ್ತು ಫ್ರಾನ್ಸಿನ ಬರ್ನಾರ್ಡ್ ಪಾಲಿಸ್ಸಿ (1510-90) ಮೊದಲಾದವರು ನದಿಗಳ ಭೂಕೊರೆತ ಸಾಮಥ್ರ್ಯ ಅಥವಾ ಭೂಕ್ಷಯದ ವಿಚಾರವಾಗಿ ನಂಬಿಕೆ ತಳೆದಿದ್ದರು. ನದಿಗಳ ಈ ಭೂವ್ಯಾಪಾರವನ್ನು ವಿವರಿಸುವ ಪ್ರಥಮ ಬರೆಹಗಳು ಆ ಕಾಲದಲ್ಲಿ ಅನೇಕ ಪರಿವರ್ತನೆಗಳೊಡನೆ ಬೈಬಲ್ಲಿನಲ್ಲಿ ಕಾಣಿಸಿಕೊಂಡವು. ಅನಂತರ ಬೈಬಲ್ಲಿನಲ್ಲಿ ಆಯಾ ಕಾಲದ ಘಟನೆಗಳನ್ನು ನಿರ್ದೇಶಿಸಿ ತೋರಿಸುವ ಕ್ರಮ ಬಳಸಲಾಯಿತು. ಬೈಬಲ್ಲಿನ ಹಳೆ ಒಡಂಬಡಿಕೆಯಲ್ಲಿ ಪ್ರಪಂಚಸೃಷ್ಟಿಯ ವಿವರಣೆಗೆ ಅವಕಾಶ ಒದಗಿಸುವಲ್ಲಿ ಮತ್ತು ಯೂರೊಪಿಯನ್ನರ ಭೂವೈಜ್ಞಾನಿಕ ವಿಚಾರಧಾರೆಯ ಮೇಲೆ ಪ್ರಭಾವ ಬೀರುವಲ್ಲಿ ಮುದ್ರಣಾಲಯದ ನೆರವು ದೊರೆಯಿತು. ಕಾಲಘಟನಾ ಸೂಚಿಯನ್ನು ಬೈಬಲ್ಲಿನಲ್ಲಿ ಸೇರಿಸುವ ರೂಢಿಯೂ ಬಂದಿತು.

	ಆರ್ಚ್ ಬಿಷಪ್ ಉಷರ್ ಮತ್ತು ಇತರರು ಭೂಸೃಷ್ಟಿಯ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ನೀಡಿದರು (1654). ಅವರ ಪ್ರಕಾರ ಸ್ವರ್ಗ, ಭೂಕೇಂದ್ರ ಮತ್ತು ಪರಿಧಿ ಇವೆಲ್ಲ ಏಕಕಾಲದಲ್ಲಿ ಜನ್ಮ ತಳೆದುವು; ಮೋಡಗಳು ನೀರಿನಿಂದ ತುಂಬಿಹೋದುವು ಮತ್ತು ಮಾನವನ ಸೃಷ್ಟಿ ಕ್ರಿ ಪೂ. 4004 ಅಕ್ಟೋಬರ್ ತಿಂಗಳಲ್ಲಿ ಮುಂಜಾನೆ 9 ಗಂಟೆಗೆ ಆಯಿತು. ಇತ್ಯಾದಿ ಇವೆಲ್ಲ ಭೂಆಕೃತಿ ಹಾಗೂ ರಚನೆಯ ಬಗೆ ಅವರಿಗಿದ್ದ ಒಲವು ಮತ್ತು ಆಸಕ್ತಿಗಳನ್ನು ತೋರಿಸುತ್ತವೆ.

	18ನೆಯ ಶತಮಾನದಲ್ಲಿ ಗಿಯೋವಾನ್ನಿ (1712-84) ಮತ್ತು ಗುಟಾರ್ಡ್ (1715-86) ಮೊದಲಾದ ಕೆಲವು ಪ್ರಗತಿಪರ ಲೇಖಕರು ನದಿಗಳ ಭೂಕೊರೆತ ಸಾಮಥ್ರ್ಯದಲ್ಲಿ ನಂಬಿಕೆ ವ್ಯಕ್ತಪಡಿಸಿದರು. ಜರ್ಮನಿಯ ಖನಿಜವಿಜ್ಞಾನಿ ಆಬ್ರಹಾಮ್ ಗೊತ್ಲಾಬ್ ವರ್ನರ್ (1749-1817) ನಿರೂಪಿಸಿದ ಪ್ರಾದೇಶಿಕ ಭೂವಿಜ್ಞಾನ (ಜಿಯಾಗ್ನೊಸಿ) ಭೂಆಕೃತಿವಿಜ್ಞಾನದ ಅಸ್ತಿತ್ವವನ್ನೇ ಮರೆಸಿತು. ಭೂಮಿಯನ್ನು ವ್ಯಾಪಿಸಿರುವ ಆದಿಮಹಾಸಾಗರದ ಅಸ್ತಿತ್ವವನ್ನು ವರ್ನರ್ ಊಹಿಸಿಕೊಂಡಿದ್ದ. ಅದರಲ್ಲಿ ಮಡ್ಡಿ ಅಥವಾ ಚರಟಗಳು ಸಂಗ್ರಹವಾಗಿ ಕಾಲಾನುಕ್ರಮದಲ್ಲಿ ಯುಕ್ತ ಬದಲಾವಣೆಯಾದ ಸಲುವಾಗಿ ಒಂದರ ಮೇಲೊಂದು ಸ್ತರಗಳು ಪೇರಿಕೊಂಡು ಆದಿಶಿಲೆಗಳ ರಚನೆಯಾಯಿತೆಂದೂ ಮುಂದೆ ದ್ವಿತೀಯವರ್ಗದ ಶಿಲೆಗಳು, ತೃತಿಯ ವರ್ಗದ ಶಿಲೆಗಳು, ಅಗ್ನಿಶಿಲೆಗಳು ಉತ್ಪತ್ತಿಯಾದವೆಂದೂ ವಾದಿಸಿದ. ಆದರೆ ವರ್ನರ್‍ವಾದಿಗಳು ಅಥವಾ ಜಲ ಜನಿತವಾದಿಗಳು ವಿವರಿಸಿದ್ದ ಪ್ರಪಂಚವ್ಯಾಪಿ ಆದಿಸಾಗರ ಮುಂದೆ ಹೇಗೆ ಕಣ್ಮರೆಯಾಯಿತು ಎಂಬುದನ್ನು ವಿವರಿಸಲು ಅಸಮರ್ಥರಾದರು. ಅದು ಹಠಾತ್ತನೆ ಕಣ್ಮರೆಯಾಗಿರಬೇಕೆಂದು ಮಾತ್ರ ಭಾವಿಸಲಾಯಿತು. ಸಾಗರದಲ್ಲಾದ ಸಂಚಯನ, ಸವೆತಗಳಿಂದ ಮತ್ತು ಇದಕ್ಕೆ ಮಿಗಿಲಾಗಿ ಸಾಗರದ ಹಠಾತ್ ಹಿಂಜರಿಕೆಯಿಂದ ಮೇಲ್ಮೈ ಉತ್ಪತ್ತಿಯಾಯಿತೆಂದು ವಿವರಣೆ ನೀಡಿದರು.

	ಹುಟ್ಟು: ಜಲಜನಿತವಾದಿಗಳು (ವರ್ನರಿಯನ್ಸ್) ಮೇಲುಗೈ ಪಡೆದಿದ್ದಾಗ ಪ್ರಕೃತಿತತ್ತ್ವವಾದಿಗಳು ನಡೆಸಿದ ಕ್ಷೇತ್ರವೀಕ್ಷಣೆ ಭೂಆಕೃತಿವಿಜ್ಞಾನದ ಹುಟ್ಟಿಗೆ ನಾಂದಿಯಾಯಿತು. ಹರಿಯುವ ನೀರು ಮತ್ತು ನದಿಗಳ ಕಾರ್ಯ ಕುರಿತು ವಿವರವಾಗಿ ಅಭ್ಯಸಿಸಿದ ಎಲ್. ಜಿ. ಡ್ಯೂಬಾಟ್ ಅವರೂ ಸೇರಿದಂತೆ ಇಟಲಿ ಮತ್ತು ಫ್ರೆಂಚ್ ಜಲವಿಭಾಗದ ಎಂಜಿನಿಯರುಗಳಿಗೆ ಇದರ ಕೀರ್ತಿ ಸಲ್ಲುತ್ತದೆ. ಫ್ರಾನ್ಸಿನ ಪ್ರಮುಖ ಭೂವಿಜ್ಞಾನಿಗಳ ಪೈಕಿ ಜಿನ್ ಬ್ಯಾಪ್ಟ್ಟಿಸ್ಟ್ ಡಿ ಲಮÁರ್ಕ್ (1744-1829) ನದಿಗಳ ಸವೆತದ ಕಾರ್ಯದಲ್ಲಿ ನಂಬಿಕೆ ತಳೆದಿದ್ದ. ಈತ ತನ್ನ ಹೈಡ್ರೊಜಿಯಾಲಜಿ ಎಂಬ ಪುಸ್ತಕದಲ್ಲಿ (1802) ಹರಿಯುವ ನೀರು ಸಮತಟ್ಟಾದ ಪ್ರದೇಶಗಳನ್ನು ಕೃಶಗೊಳಿಸುವುದರಿಂದ ಪರ್ವತಗಳು ರೂಪುತಳೆಯುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ. ಯೂರೊಪಿನಲ್ಲಿ ಬೆರಾನ್ ಜಾರ್ಜನ್ ಕ್ಯೂವಿಯರ್ ಎಂಬವ ವ್ಯಕ್ತಪಡಿಸಿದ ಪ್ರಭಾವಶಾಲಿ ಹಾಗೂ ಖಚಿತ ಭೂವೈಜ್ಞಾನಿಕ ಅಭಿಪ್ರಾಯಗಳಿಂದ ಲಮಾರ್ಕ್ ಮತ್ತು ಜಲವಿಭಾಗದ ಎಂಜಿನಿಯರುಗಳ ಅಭಿಪ್ರಾಯಗಳಿಗೆ ಮನ್ನಣೆ ದೊರೆಯಲಿಲ್ಲ. ಕ್ಯೂವಿಯರ್ ಪ್ರಳಯವಾದಿಯಾಗಿದ್ದವ. ರೂಪಣೆಗಳು, ಜೀವ್ಯವಶೇಷಗಳು, ಚಿಪ್ಪುಗಳು ಮತ್ತು ಒಡೆದ ಸ್ತರಗಳ ಸಂಚಯನ ಇವುಗಳ ಆಧಾರದ ಮೇಲೆ ಪ್ರಪಂಚದಲ್ಲಿ ಪ್ರಳಯಗಳಾಗುವುವೆಂದೂ ಅಂತಿಮ ಪ್ರಳಯವೇ ಬಿಬ್ಲಿಕಲ್ ಫ್ಲಡ್ (ಬೈಬಲಿನಲ್ಲಿ ತಿಳಿಯಪಡಿಸಿರುವ ಪ್ರಳಯ) ಎಂದೂ ಅಭಿಪ್ರಾಯಪಟ್ಟ. ಬೈಬಲಿನಲ್ಲಿ ನೋವಾ ಎಂಬಾತನ ಕಾಲದಲ್ಲಿ ಮಹಾ ಜಲ ಪ್ರಳಯ ಕೊನೆಗೊಂಡಾಗ ಸಾಗರ ಶಾಂತವಾಯಿತು ಮತ್ತು ಅದನ್ನು ಬಂದು ಸೇರುವ ನದಿಗಳ ಕಾರ್ಯದಿಂದ ಇಂದಿನ ಭೂಮೇಲ್ಮೈಲಕ್ಷಣಗಳು ರೂಪುಗೊಂಡುವು ಎಂದು ಕ್ಯೂವಿಯರ್ ಅನುಯಾಯಿಗಳು ಅಭಿಪ್ರಾಯ ಪಟ್ಟರು.

	ಸ್ವಿಟ್‍ಜûರ್‍ಲೆಂಡಿನ ಹೊರಾಸ್ ಬಿನಿಡಿಕ್ಟ್ ಡಿ ಸಾಸೂರ್ (1740-99) ಪ್ರಳಯವಾದಿಗಳಿಗಿಂತ ಸ್ವಲ್ಪ ಭಿನ್ನ ಅಭಿಪ್ರಾಯ ತಳೆದಿದ್ದ. ಸಣ್ಣಪುಟ್ಟ ಕೊಳ್ಳಗಳು ಅತಿರಭಸದಿಂದ ಬೀಳುವ ಮಳೆಯಿಂದಾಗುವುವೆಂದೂ ವಿಶಾಲಕೊಳ್ಳಗಳು ಅತಿ ರಭಸದಿಂದ ಹರಿಯುವ ನದಿಗಳ ಕೊರೆತಗಳಿಂದ ಆಗುವುವೆಂದೂ ತಿಳಿಸಿದ. ಹೀಗಾಗಿ ಪ್ರಪಂಚವ್ಯಾಪಿಯಾದ ಸಾಗರ ಭೂಮಿಯೊಳಕ್ಕೆ ಸಂದುಗಳ ಮೂಲಕ ಕಣ್ಮರೆಯಾಯಿತೆಂದೂ ಅಭಿಪ್ರಾಯಪಟ್ಟ.. ಹಿಮನದಿಗಳ ಕಾರ್ಯವನ್ನೂ ಈತ ಅಭ್ಯಸಿಸಿದ. ಈತ ಸ್ಕಾಟ್ಲೆಂಡಿನ ಭೂವಿಜ್ಞಾನಿ ಜೇಮ್ಸ್ ಹಟ್ಟನ್ (1726-97) ಮತ್ತು ಪ್ಲೆ ಫೇರ್ ಹೊರೇಸ್ ಎಂಬವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದ. ನದಿಗಳ ಕಾರ್ಯಾಚರಣೆಯಲ್ಲಿ ನಂಬಿಕೆಯಿಟ್ಟವರ ಪೈಕಿ ಜೇಮ್ಸ್ ಹಟ್ಟನ್ ಮೊದಲಿಗ. ಈತ ಆಧುನಿಕ ಭೂಆಕೃತಿವಿಜ್ಞಾನದ ನಿಜ ಪ್ರವರ್ತಕ ಎಂಬ ಖ್ಯಾತಿಗೆ ಭಾಜನನಾಗಿದ್ದಾನೆ. ಸ್ಕಾಟ್ಲೆಂಡಿನಲ್ಲಿ ಈತ ಅಗ್ನಿ ಜನಿತವಾದಿಗಳ (ಪ್ಲೂಟೋನಿಸ್ಟ್) ನಾಯಕತ್ವ ವಹಿಸಿದ್ದ. ಭೂಮಿಯ ಮೇಲಿದ್ದ ಶಿಲೆಗಳೆಲ್ಲ ಮೂಲ ಶಿಲೆಗಳಲ್ಲಿ ಶಿಥಿಲಗೊಂಡು ಛಿದ್ರಗೊಂಡ ಶಿಲಾಸಾಮಗ್ರಿಗಳೆಲ್ಲವೂ ನೀರಿನ ಮೂಲಕ ಸಾಗಿ ಸಾಗರಗಳಲ್ಲಿ ಸಂಚಯನವಾಗುವುದರ ಮೂಲಕ ರಚಿತವಾಗಿವೆ ಎಂಬುದಾಗಿ ಹಟ್ಟನ್ ವಾದಿಸಿದ. ಸಂಚಯನಗೊಂಡ ನಿಕ್ಷೇಪಗಳು ಕಾಲಕ್ರಮದಲ್ಲಿ ಭೂಮಿಯ ಅಂತರಾಳದಲ್ಲಿಯ ಅತ್ಯಧಿಕ ಉಷ್ಣತೆಯಿಂದ ಕರಗಿ ಲಾವಾ ಅಥವಾ ಮ್ಯಾಗ್ಮಾ ಎಂಬ ವಸ್ತುವಿಗೆ ಪರಿವರ್ತನೆಗೆ ಹೊಂದಿದಂಥವು; ಅಂತರಾಳದಲ್ಲಿಯ ಒತ್ತಡದಿಂದ ಕ್ರಮೇಣ ಹೊರದೂಡಲ್ಪಟ್ಟು ವಿರೂಪಗೊಂಡು ಈ ಶಿಲೆಗಳು ಈಗ ಮೇಲೆ ಕಾಣಿಸಿವೆ ಎಂಬುದು ಹಟ್ಟನನ ಅಭಿಪ್ರಾಯವಾಗಿತ್ತು.

	ಹಟ್ಟನ್ ಕಾಲವಾದ ಬಳಿಕ ಅವನ ಸಹೋದ್ಯೋಗಿ ಜಾನ್ ಪ್ಲೆ ಫೇರ್ ಎಂಬವ ಭೂಮಿಯ ಬಗ್ಗೆ ಹಟ್ಟನ್ ಪ್ರತಿಪಾದಿಸಿದ್ದ ಸಿದ್ಧಾಂತವನ್ನು ಮತ್ತಷ್ಟು ಪುಷ್ಟೀಕರಿಸಿದ. ಭೂಮಿಯ ಮೇಲೆ ಹರಿಯುವ ನದಿಗಳು ಭೂಮಿಯ ಮೇಲ್ಮೈ ರಚನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಕರ್ತೃಗಳು ಎಂಬುದನ್ನು ಈತ ಒತ್ತಿ ಹೇಳಿದ. ನದಿಗಳು ಕಣಿವೆಗಳನ್ನು ನಿರ್ಮಿಸುವುವೆಂದೂ ನದಿಯ ಬೆಳೆವಣಿಗೆಯಲ್ಲಿ ಇದರ ಪ್ರಧಾನ ಭಾಗಕ್ಕೂ (ಟ್ರಂಕ್) ಶಾಖೆಗಳಿಗೂ (ಟ್ರಬ್ಯುಟರೀಸ್) ಅತ್ಯಂತ ಸಮರ್ಪಕ ಹೊಂದಾಣಿಕೆ ಇದೆಯೆಂದೂ ನಿರೂಪಿಸಿದ.

	ತತ್ತ್ವಗಳು: ಭೂಮಿಯನ್ನು ಏಳು ದೊಡ್ಡ ಗೋಳಗಳಿಂದಾಗಿರುವ ಒಂದು ಗ್ರಹವೆಂದು ಪರಿಗಣಿಸಬಹುದು. ಈ ಭೂವಿಭಾಗಗಳು ಹೀಗಿವೆ:

	ಭೂಮಿಯ ಒಳಭಾಗ (ಇಂಟೀರಿಯರ್): ಇಲ್ಲಿ ಮ್ಯಾಗ್ಮಾ ಉತ್ಪತ್ತಿಗೆ ಮೂಲವೆನಿಸುವ ಅಗ್ನಿಶಿಲೆಗಳಿವೆ. ಅಗಾಧ ಒತ್ತಡ ಮತ್ತು ಅಧಿಕ ಉಷ್ಣತೆಯ ಪ್ರಭಾವದಿಂದ ಇವು ಬಲುಮಟ್ಟಿಗೆ ಘನರೂಪದಲ್ಲಿ ಇದ್ದರೂ ಇವುಗಳ ಅಣುಗಳು ಚಲಿಸುವ ಸ್ಥಿತಿಯಲ್ಲಿವೆ.

	ಶಿಲಾಗೋಳ (ಲಿತೋಸ್ಫಿಯರ್): ಭೂಖಂಡಗಳ ಕೆಳಗೆ ಇದು ಸುಮಾರು 30-40 ಕಿಮೀ ದಪ್ಪವಿದೆ. ಸಾಗರದ ಕೆಳಗೆ 5 ಕಿಮೀ ಮತ್ತು ಮಧ್ಯಾಂತರ ಪಟ್ಟಿಗಳಲ್ಲಿ (ಇಂಟರ್‍ಮಿಡಿಯೇಟ್ ಬೆಲ್ಟ್ಸ್) ಇದರ ದಪ್ಪ 12 ಕಿಮೀ.

	ಖಂಡಗಳ ಮೇಲ್ಭಾಗದಲ್ಲಿ ನಿಕಟವಾಗಿ ಹೊಂದಿಕೊಂಡ ಮಣ್ಣಿನ ಪದರವಿದೆ. ಇದರ ಆಳ 1-2ಮೀ. ಭೂತೋಗಟೆಯಲ್ಲಿಯ ಎರಡು ಆಯಾಮಗಳ ಒಂದು ಗೋಳ. ಸಮುದ್ರಗಳು ಖಂಡಗಳು ತಗ್ಗು ಮತ್ತು ಎತ್ತರ ಪ್ರದೇಶಗಳು ಹಾಗೂ ಅಲ್ಪೈನ್ ಪರ್ವತ ಶ್ರೇಣಿಗಳು ಇಲ್ಲಿವೆ.

	ಹೆಚ್ಚು ಕಡಿಮೆ 2/3 ರಷ್ಟು (71%) ಭೂಭಾಗ ಸಾಗರಗಳಿಂದ ಅಥವಾ ಜಲ ಗೋಳದಿಂದ ಆವೃತವಾಗಿದೆ.

	ಹಿಮದ ಹಾಳೆಗಳಿಂದ ಆವೃತವಾಗಿರುವ ಧ್ರುವಪ್ರದೇಶಗಳು ಮತ್ತು ಹಿಮನದಿಗಳನ್ನು ಒಳಗೊಂಡ ಉತ್ತುಂಗ ಪರ್ವತ ಶ್ರೇಣಿಗಳು.

	ಭೂತೊಗಟೆಯ ಕಾಲುಭಾಗ ಮಾತ್ರ (26%) ವಾಯುಮಂಡಲದ ಜೊತೆ ನೇರ ಸಂಪರ್ಕ ಪಡೆದಿದೆ.

	ಭೂಆಕೃತಿವಿಜ್ಞಾನದಲ್ಲಿ ಈ ಮೇಲೆ ವಿವರಿಸಿದ ಭೂತೊಗಟೆಯ ವಿಚಾರ ಪ್ರಸ್ತಾವಿತವಾಗಿದೆ. ಮುಖ್ಯವಾಗಿ ಖಂಡಗಳ ಮೇಲ್ಮೈಲಕ್ಷಣಗಳು ಜಟಿಲವೂ ವೈವಿಧ್ಯಮಯವೂ ಆಗಿವೆ. ಹಿಮನದಿಗಳು ಕರಗಿದಾಗ ಹಿಮಹಾಳೆಗಳ ಕೆಳಗೆ ಹುದುಗಿದ್ದ ವಿವಿಧ ತೆರನಾದ ಪ್ರದೇಶಗಳನ್ನು ಗುರುತಿಸಬಹುದು.

	ಭೂಮಿ ಸೂರ್ಯನಿಂದ ಪಡೆದ ಬೆಳಕನ್ನು ಭಾಗಶಃ ಉಷ್ಣವಾಗಿ ಪರಿವರ್ತಿಸಿ ಉಳಿದ ಸ್ವಲ್ಪಭಾಗವನ್ನು ಪುನಃ ವಾಯುಮಂಡಲಕ್ಕೆ ಪ್ರತಿಫಲಿಸುತ್ತದೆ. ಪ್ರಕೃತಿಯಲ್ಲಿ ನಡೆಯುವ ಈ ಕಾರ್ಯದಲ್ಲಿ ಕ್ಷೋಭಮಂಡಲದ (ಟ್ರೋಪೊಸ್ಫಿಯರ್) ಚಟುವಟಿಕೆಗಳಿಗೆ ಅವಶ್ಯವಾದ ಬಲವನ್ನು ಈಉಷ್ಣ ಒದಗಿಸುತ್ತದೆ. ಮುಂದೆ ಇದು ಮಳೆ, ತೊರೆ, ನದಿ, ಗಾಳಿ ಮತ್ತು ಹಿಮನದಿಗಳ ರೂಪದಲ್ಲಿ ಭೂಮೇಲ್ಮೈಯಲ್ಲಿ ಕಾರ್ಯವೆಸಗುತ್ತದೆ.

	ವಾಯುಮಂಡಲ (ಅಟ್ಮಾಸ್ಫಿಯರ್), ಜಲಗೋಳ (ಹೈಡ್ರೊಸ್ಫಿಯರ್) ಮತ್ತು ಅತಿಶೀತಗೋಳ (ಕ್ರಯೋಸ್ಫಿಯರ್) ಇವು ಮೂರು ಭೂಮಿಯ ಮೇಲೆ ಸುಲಭವಾಗಿ ಚಲಿಸುವ ಹೊದಿಕೆಗಳಂತಿವೆ. ಇಲ್ಲೆಲ್ಲ ವಾಯು, ನೀರು ಮತ್ತು ಮಂಜುಗಡ್ಡೆಯ ಅಣುಗಳ ಸಂತತ ಚಲನೆಯನ್ನು ಕಾಣಬಹುದು. ಆದರೆ ಪ್ರಕೃತಿಯಲ್ಲಿ ಇಂಥ ಚಟುವಟಿಕೆ ಯಾವೊಂದೂ ಶಾಶ್ವತ ಗುರುತನ್ನಾಗಲೀ ಜೀವ್ಯವಶೇಷದ ರಚನೆಯನ್ನಾಗಲೀ ಉಳಿಸುವುದಿಲ್ಲ. ಈ ತತ್ತ್ವವನ್ನು ಮ್ಯಾಗ್ಮಾ ಒಳಗೊಂಡ ಭೂಮಿಯ ಅಂತರಾಳಕ್ಕೂ ಅನ್ವಯಿಸಬಹುದು.

	ಹಲವಾರು ದಶಲಕ್ಷ ವರ್ಷಗಳ ಹಿಂದೆ ಸಂಭವಿಸಿದ ಘಟನಾವಳಿಗಳು ಭೂತೊಗಟೆಯ ಮೇಲೆ ಅಚ್ಚೊತ್ತಿ ನಿಂತಿವೆ. ಹೊಸ ಮತ್ತು ಹಳೆಯ ಶಿಲೆಗಳನ್ನು ಪರಿಶೋಧಿಸುವುದರ ಮೂಲಕ ಭೂಇತಿಹಾಸವನ್ನು ಅರಿಯಲು ಭೂವಿಜ್ಞಾನ ಸಹಕಾರಿ. ಭೂಮಿಯ ಮೇಲ್ಮೈಗಳು ಮತ್ತು ಅವುಗಳ ವಿವಿಧ ಆಕಾರಗಳು ಇತ್ತೀಚೆಗೆ ರೂಪುಗೊಂಡವಾದರೂ ಅವು 10ರಿಂದ 100 ದಶಲಕ್ಷ ವರ್ಷಗಳಷ್ಟು ಪ್ರಾಚೀನವಾದವು. ಭೂಆಕೃತಿವಿಜ್ಞಾನದ ಅಧ್ಯಯನ ಒಂದು ರೀತಿಯಲ್ಲಿ ಭೂಇತಿಹಾಸದ ವಿಜ್ಞಾನವೂ ಆಗಿದೆ. ಚತುರ್ಥ ಭೂಕಾಲಯುಗದಲ್ಲಿ (ಕ್ವಾಟರ್ನರಿ) ಅಧುನಿಕ ಭೂಆಕೃತಿವಿಜ್ಞಾನದ ಸ್ಪಷ್ಟ ಬೆಳೆವಣಿಗೆ ಸಾಧ್ಯವಾಯಿತು.

	ಐತಿಹಾಸಿಕ ಸಮೀಕ್ಷೆ: ಭೂಆಕೃತಿವಿಜ್ಞಾನ ಭೂವಿಜ್ಞಾನಕ್ಕಿಂತಲೂ ಒಂದು ಕಿರಿಯ ವ್ಶೆಜ್ಞಾನಿಕ ವಿಷಯವಾಗಿ ಅಭಿವೃದ್ಧಿಗೊಂಡಿತು. ಭೂಮಿಯ ಮೇಲ್ಮೈ ಉಬ್ಬು ರಚನೆಗಳನ್ನು (ರಿಲೀಫ್ಸ್) ಕುರಿತಾದ ವಾದವಿವಾದಗಳು ಬಹಳ ಕಾಲ ಪರ್ಯಂತವೂ ಮುಂದುವರಿದುವು. ಭೂವಿಜ್ಞಾನಿಗಳು ಗುರುತಿಸಿದ ಮಡಿಕೆಗಳಂಥ ರಚನೆಗಳು ಪರ್ವತಶ್ರೇಣಿಗಳ ಮತ್ತು ಕಣಿವೆಗಳ ನಿರ್ಮಾಣಕ್ಕೆ ಕಾರಣವಾದವೆಂದು ಭಾವಿಸಲಾಯಿತು. 19ನೆಯ ಶತಮಾನದ ಪ್ರಾರಂಭದಲ್ಲಿ ಭೂವಿಜ್ಞಾನಿ ಪ್ಲೇ ಫೆರ್ ನದಿಗಳ ಕೊರೆತದಿಂದ ನಿರ್ಮಿತವಾದ ಕಣಿವೆಗಳನ್ನು ಗುರುತಿಸಿದರು.

	ಪಾವೆಲ್ (1875), ರಿಚ್‍ತಾನ್‍ಫೆನ್(1886) ಮತ್ತು ಮಾರ್ಟೊನ್ (1909) ಇವರೆಲ್ಲ ನದಿಗಳ ಕೊರೆತ ಮತ್ತು ಕಣಿವೆಗಳ ರಚನೆಯ ಬಗೆಗೆ ಆಧುನಿಕ ಅಭಿಪ್ರಾಯಗಳನ್ನು ರೂಪಿಸಿದರು. ಎ. ಪೆಂಕ್ (1909) ನೀರ್ಗಲ್ಲುನದಿಗಳ ಕೆಳಗಿನ ಭೂವಿನ್ಯಾಸ ರಚನೆ ಮತ್ತು ಅದರ ಪ್ರಮುಖ ಲಕ್ಷಣಗಳನ್ನು ಗುರುತಿಸಿದರು. ಇವರು ಪ್ರಮುಖ ಭೂಮೇಲ್ಮೈ ಉಬ್ಬರ ರೂಪಣೆಗೆ (ರಿಲೀಫ್ ಫಾರ್ಮೇಷನ್) ಪೂರಕವಾಗಿ ಭೂಮಿಯನ್ನು ವಾಯುಗುಣದಿಂದ ನಿಯಂತ್ರಿಸಲ್ಪಟ್ಟ ಮೂರು ವಲಯಗಳಾಗಿ ವಿಭಾಗಿಸಿದರು. ಇದರಿಂದ ಪ್ರಭಾವಿತರಾದ ಡಬ್ಲ್ಯು. ಎಮ್. ಡೇವಿಸ್ (1899-1912) ಭೂಆಕೃತಿವಿಜ್ಞಾನದಲ್ಲಿ ಉತ್ಪತ್ತಿಯ ತತ್ತ್ವವನ್ನು (ಜೆನೆಟಿಕ್‍ತಿಯೊರಿ) ನಿರೂಪಿಸಲು ಸಾಧ್ಯವಾಯಿತು. ಭೂವಿಜ್ಞಾನ ಅಥವಾ ಪವನ ಶಾಸ್ತ್ರದ ಜೊತೆಗೆ ಇವರ ತತ್ತ್ವ ಇನ್ನೂ ನೇರ ಸಂಬಂಧ ಪಡೆದಿಲ್ಲ. ಪಾಸರ್ಜ್ (1912) ಎಂಬವರು ಬಲು ಹಿಂದೆಯೇ ಈ ಕ್ಷೇತ್ರದಲ್ಲಿ ಸಾಕಪ್ಟು ಕೆಲಸ ಮಾಡಿದರೂ ಈ ಮೇಲೆ ತಿಳಿಸಿದ ವಿವರಣೆಗಳನ್ನು ಕೇವಲ ಕಳೆದ 15 ವರ್ಷಗಳಿಂದೀಚೆಗೆ ಭೂಆಕೃತಿ ವಿಜ್ಞಾನದ ಅಧ್ಯಯನದಲ್ಲಿ ಸಮರ್ಪಕವಾಗಿ ಅಳವಡಿಸಲಾಗಿದೆ. ಎಂದೇ ಆಧುನಿಕ ಜೀವಿಕಲ್ಪದಲ್ಲಿ ನಡೆದ ಭೂವ್ಶೆಜ್ಞಾನಿಕ ಪ್ರಕ್ರಿಯೆಗಳು ಮುಖ್ಯವಾಗಿ ಗತ್ಯಾತ್ಮಕ ಭೂ ಆಕೃತಿವಿಜ್ಞಾನಕ್ಕೆ (ಡೈನಮಿಕಲ್ ಮಾರ್ಫಾಲಜಿ) ಸಂಬಂಧಿಸಿವೆ ಎಂದು ಹೇಳಬಹುದು. ಈ ಪ್ರಕ್ರಿಯೆಗಳಿಗೂ ಇವುಗಳ ಕಾರ್ಯಗಳಿಂದ ರೂಪುಗೊಂಡ ಭೂಮಿಯ ಮೇಲ್ಮೈಲಕ್ಷಣಗಳಿಗೂ ನಡುವೆ ಇರುವ ವ್ಯತ್ಯಾಸUಳು ಹಲವು. ಭೂಮಿಯ ಮೇಲಿನ ಹವೆಯಲ್ಲಾಗುವ ಬದಲಾವಣೆಯ ಕಾರಣವಾಗಿ ಅನೇಕ ವಿಧವಾದ ವ್ಯಾಪಕ ಪರಿಣಾಮಗಳಾಗುತ್ತವೆ. ವಾಯು ಗುಣವಲಯಗಳಲ್ಲಿ ಕೆಲವು ವಿಶಿಷ್ಟ ಮೇಲ್ಮೈಲಕ್ಷಣಗಳನ್ನೂ ಗುರುತಿಸಬಹುದಾಗಿದೆ. ಈ ತೆರನಾದ ಅಧ್ಯಯನಕ್ಕೆ ವಾಯುಗುಣ ಭೂಆಕೃತಿವಿಜ್ಞಾನ (ಕ್ಲೈಮ್ಯಾಟಿಕ್ ಜಿಯೊಮಾಪಾರ್ಫಾಲಜಿ) ಎಂದು ಹೆಸರು. ಭೂಕಾರ್ಯ ಕರ್ತೃಗಳ ಸವೆತವನ್ನು ವಿರೋಧಿಸುವ ಸಾಮಥ್ರ್ಯವಿರುವ ಅನೇಕ ರಚನೆಗಳು ಭೂತೊಗಟೆಯಲ್ಲಿ ಕಂಡುಬರುತ್ತವೆ. ಇದರ ಅಧ್ಯಯನಕ್ಕೆ ರಾಚನಿಕ ಭೂಆಕೃತಿವಿಜ್ಞಾನ (ಸ್ಟ್ರಕ್ಚರಲ್ ಜಿಯೊಮಾರ್ಫಾಲಜಿ) ಎಂದು ಹೆಸರು. ಈ ನಿಟ್ಟಿನಲ್ಲಿ ಇತ್ತೀಚಿನ ಬೆಳೆವಣಿಗೆಯೆಂದರೆ ಇಂದಿನ ಭೂಆಕೃತಿಗಳು ಎಲ್ಲ ಭಾಗಗಳಲ್ಲೂ ಏಕ ರೀತಿಯ ವಾಯುಗುಣವಿರುವ ಪರಿಸ್ಥಿತಿಗಳಲ್ಲಿ ರಚಿತವಾಗಿಲ್ಲದಿರುವುದು ಮತ್ತು ಅವುಗಳ ಆಕಾರದಲ್ಲಿ ಏಕರೀತಿಯ ರಚನಾಕ್ರಮವೂ ಕಂಡುಬರದಿರುವುದು. ಅವು ಹಿಂದಿನ ಯುಗಗಳ ಹವೆಯ ಪ್ರಭಾವದಿಂದ ರಚನೆಗಳನ್ನು ಹೊಂದಿರುವುದು ಮಾತ್ರವಲ್ಲದೆ ಪ್ರಾಚೀನ ರಚನಾಪರಂಪರೆಯನ್ನು ಹೊಂದಿರುವುದೂ ಕಂಡುಬರುತ್ತದೆ. ಈ ವೈವಿಧ್ಯಮಯ ಪರಂಪರೆಗಳು ಮತ್ತು ಅವುಗಳ ಬೆಳೆವಣಿಗೆಯನ್ನು ಕುರಿತಾದ ಅಧ್ಯಯನಕ್ಕೆ ವಾಯುಗುಣ ಸಂಬಂಧಿತ ಭೂಆಕೃತಿವಿಜ್ಞಾನ (ಕ್ಲೈಮೆಟೊ-ಜೆನೆಟಿಕ್ ಜಿಯೊಮಾರ್ಫಾಲಜಿ) ಎಂದು ಹೆಸರು.

	ಆಧುನಿಕ ವಿಭಾಗಗಳು ಮತ್ತು ವಿಧಾನಗಳು: ನದಿಗಳ ಕಾರ್ಯಗಳಿಂದಾದ ಭೂವಿನ್ಯಾಸಗಳು ಪ್ರಕೃತಿಯಲ್ಲಿ ನಡೆಯುವ ಭೂಕಾರ್ಯಗಳಸಂಯೋಜನೆಯಿಂದ ರೂಪುಗೊಳ್ಳುತ್ತವೆ. ಇವನ್ನು ಕುರಿತ ವಿಭಾಗ ಗತ್ಯಾತ್ಮಕ ಆಕೃತಿವಿಜ್ಞಾನ (ಡೈನಮಿಕ್ ಜಿಯೊಮಾರ್ಫಾಲಜಿ).

	ಶಿಥಿಲೀಕರಣ (ವೆದರಿಂಗ್): ಇದು ಪ್ರಕೃತಿಯಲ್ಲಿ ನಡೆಯುವ ಒಂದು ಅಜೈವಿಕ ಕ್ರಿಯೆ. ಹವೆಯ ಬದಲಾವಣೆ, ಉಷ್ಣತೆಯ ವೈಪರೀತ್ಯ, ಅಂತರ್ಜಲ ನೀರ್ಗಲ್ಲು ಕಾರ್ಯ ಇವುಗಳಿಂದ ಶಿಥಿಲೀಕರಣ ನಡೆಯುತ್ತದೆ. ಇದರಿಂದ ಭೂಮಿಯ ಹೊರ ಕವಚ (ಮೇಲ್ಪದರ) ಶಿಥಿಲಗೊಳ್ಳುತ್ತದೆ. ಇದರ ಜೊತೆಗೆ ಯಾಂತ್ರಿಕ ಹಾಗೂ ರಾಸಾಯನಿಕ ಪ್ರಕ್ರಿಯೆಗಳು ಸಾಕಷ್ಟು ಆಳದಲ್ಲಿರುವ ಶಿಲೆಗಳನ್ನು ಪರಿಣಾಮಕಾರಿಯಾಗಿ ಶಿಥಿಲಗೊಳಿಸಬಲ್ಲವು. ಧ್ರುವ ಪ್ರದೇಶಗಳಲ್ಲಿ ಭೌತಿಕ ಅಥವಾ ಯಾಂತ್ರಿಕ ಶಿಥಿಲೀಕರಣ ಪ್ರಧಾನವಾಗಿ ಕಂಡುಬರುತ್ತದೆ. ಏಕೆಂದರೆ ಆ ಪ್ರದೇಶ ಸದಾ ಕಾಲವೂ ಹಿಮದಿಂದ ಆವೃತವಾಗಿರುವುದರಿಂದ 1,000 ಮೀ ಆಳದವರೆಗೂ ಇರುವ ಶಿಲೆಗಳಲ್ಲಾಗುವ ಬದಲಾವಣೆಗಳಿರುವುದು ಕಂಡುಬರುತ್ತದೆ. ಮಧ್ಯ ಅಕ್ಷಾಂಶ (ಮಿಡ್‍ಲ್ಯಾಟಿಟ್ಯೂಡ್) ಭಾಗಗಳಲ್ಲಿ ಕೇವಲ ಕೆಲವೇ ಮೀಟರುಗಳಷ್ಟು ಆಳದವರೆಗೆ ಶಿಲೆಗಳು ಶಿಥಿಲೀಕರಣಕ್ಕೆ ಒಳಗಾಗಿರುವುದು ಗಮನಾರ್ಹ. ಸುಣ್ಣ ಶಿಲೆಗಳಿರುವ ಪ್ರದೇಶಗಳನ್ನು ಬಿಟ್ಟು ಕಾಸ್ರ್ಟ್ ವಿದ್ಯಮಾನಗಳು (ಕಾಸ್ರ್ಟ್ ಫಿನಾಮಿನ) ಶಿಥಿಲೀಕರಣಗಳು ಹೆಚ್ಚಾಗಿ ಆಯಾಪ್ರದೇಶದ ವಾಯುಗುಣವನ್ನು ಅವಲಂಬಿಸಿವೆ. ಅಂತೆಯೇ ಈ ಕಾರ್ಯದಲ್ಲಿ ಮೂಲಶಿಲೆಗಳ ಗುಣಗಳೂ ಬಲು ಮುಖ್ಯ. 

	ಮಣ್ಣಿನ ರೂಪಣೆ (ಸಾಯಿಲ್ ಫಾರ್ಮೇಷನ್): ಶಿಥಿಲೀಕರಣ ವಲಯದ ಅತ್ಯಂತ ಮೊದಲನೆಯ ಪದರದ ಆಳ 1-2 ಮೀ. ಜೈವಿಕಬಲಗಳ ಹಲವಾರು ಚಟುವಟಿಕೆಗಳಿಂದ (ಉದಾಹರಣೆಗೆ ಗಿಡಮರಗಳ ಕಾಂಡಗಳು, ಬೇರುಗಳು, ಮಣ್ಣು ಹುಳುಗಳು, ಇದಕ್ಕಿಂತ ಹೆಚ್ಚಾಗಿ ಬ್ಯಾಕ್ಟೀರಿಯಾ ಇತ್ಯಾದಿ) ಈ ಪದರ ಭೌತಿಕ ಮತ್ತು ರಾಸಾಯನಿಕವಾಗಿ ತೀವ್ರವಾದ ಬದಲಾವಣೆಗೆ ಒಳಗಾಗುತ್ತದೆ. 

	ನಗ್ನೀಕರಣ (ಡೆನ್ಯುಡೇಷನ್) : ಭೂಮಿಯ ಮೇಲ್ಮೈಯ ಎಲ್ಲ ರಚನೆಗಳು ಮಣ್ಣಿನ ಹೊದಿಕೆಯಿಂದ ಕೂಡಿವೆ. ಹೆಚ್ಚು ಕಡಿಮೆ ಸಮತಟ್ಟು ಪ್ರದೇಶಗಳಿಂದ ಎತ್ತರದ ಪರ್ವತಗಳ ಪಾಶ್ರ್ವಗಳು ಮಳೆ, ಕರಗಿದ ಹಿಮನದಿಗಳು ಮತ್ತು ಗಾಳಿಯಿಂದ ಸಂತತವಾದ ಸವೆತಕ್ಕೆ ಈಡಾಗುತ್ತಿರುತ್ತವೆ. ಸವೆತದಿಂದ ಉತ್ಪತ್ತಿಯಾಗುವ ಬಿಡಿ ಶಿಲಾಸಾಮಗ್ರಿ ಇತ್ಯಾದಿ ವಸ್ತುಗಳು ನದಿಗಳ ಮೂಲಕ ಸಾಗಿ ಬಂದು ಅಂತಿಮವಾಗಿ ಸಾಗರ ಸೇರುತ್ತವೆ. ಇದರಿಂದ ಪ್ರತಿಯೊಂದು ಸ್ಥಳದ ಮಣ್ಣಿನಹೊದಿಕೆ ನಾಶವಾಗುವುದು ಸಹಜವೇ. ಸಮತೋಲ ಪರಿಸ್ಥಿತಿಗಳಿದ್ದ ಕಡೆ ಶಿಥಿಲೀಕರಣ ಕ್ರಿಯೆ ಮಣ್ಣಿನ ತಳಭಾಗಕ್ಕೂ ಪ್ರವೇಶಿಸುವುದು ಸಾಧ್ಯ. ಹೀಗೆ ಇಡೀ ಭೂಭಾಗ ಸತತ ನಗ್ನೀಕರಣಕ್ಕೆ ಒಳಗಾಗುತ್ತಿರುತ್ತದೆ. 

	ನದಿಗಳಿಂದಾಗುವ ಕ್ಷಯ: ನದಿಗಳು ಪ್ರಮುಖ ಭೂಕಾರ್ಯ ಕರ್ತೃಗಳು. ಇವು ನೆಲದ ಮೇಲೆ ಸದಾ ಹರಿಯುತ್ತ ಆಯಾ ಪ್ರದೇಶಗಳನ್ನು ಚಿತ್ರವಿಚಿತ್ರ ಆಕಾರಗಳಲ್ಲಿ ಕೊರೆದು ವಿಭಜಿಸುತ್ತವೆ. ಇದೇ ಮಣ್ಣಿನ ಕ್ಷಯ. ಇದು ಯಾವಾಗಲೂ ನಗ್ನೀಕರಣಕ್ಕಿಂತಲೂ ಶೀಘ್ರ ಗತಿಯಲ್ಲಿ ಸಾಗುವುದು. ಅನೇಕ ವೇಳೆ ಆಳದ ಕೊಳ್ಳಗಳಲ್ಲೊ ಕಣಿವೆಗಳಲ್ಲೊ ಕ್ಷಯ ಕಾರ್ಯದಿಂದ ಕಡಿದಾದ ಇಳಿಜಾರುಗಳು ಏರ್ಪಡುತ್ತವೆ. ನದಿಗಳಿಂದ ಉಂಟಾಗುವ ಕ್ಷಯದ ಕಾರ್ಯಗತಿ ಮತ್ತು ನಗ್ನೀಕರಣದೊಡನೆ ಅದಕ್ಕಿರುವ ಸಂಬಂಧ ಹವೆಗೆ ಅನುಗುಣವಾಗಿ ಬದಲಾವಣೆ ಹೊಂದುತ್ತವೆ. 

	ನದೀ ನಿಕ್ಷೇಪಗಳು (ರಿವರ್ ಡಿಪಾಸಿಷನ್ಸ್) : ಇವು ನದೀ ಕಣಿವೆಗಳ ಕೆಳಭಾಗದ ನಿಕ್ಷೇಪಗಳು. ಬೀಸಣಿಗೆಯ ಆಕಾರದ, ದಪ್ಪ ಉಸುಕಿನ ಕಣಗಳುಳ್ಳ (ಗ್ರಾವೆಲ್) ನಿಕ್ಷೇಪಗಳು, ಗ್ರಾವೆಲ್ ಪದರಗಳು, ಜೇಡಿಮಣ್ಣಿನ ಸಮತಟ್ಟು ಪ್ರದೇಶಗಳು, ಸರೋವರ ನಿಕ್ಷೇಪಗಳು ಮತ್ತು ಸಮುದ್ರದ ಸಮೀಪದ ನದೀ ಮುಖಜ ಭೂಮಿ ಇಂಥಲ್ಲಿ ನದೀಪದರಗಳಿರುತ್ತವೆ. ಖಂಡಗಳ ಮೇಲೆ ಸುಮಾರು 80% ಭಾಗದಲ್ಲಿ ಈ ಮೇಲಿನ ಪ್ರಕ್ರಿಯೆಗÀಳು ಪ್ರಧಾನ. ಉಳಿದ 20% ರಷ್ಟು ಭಾಗದಲ್ಲಿ ಗಣನೀಯವಾಗಿ ಭೂಪಾತಗಳು, ನೀರ್ಗಲ್ಲು ನದಿಗಳ ನಿಕ್ಷೇಪಗಳು, ಗಾಳಿಯಿಂದಾಗುವ ಕ್ಷಯ, ಕಾಸ್ರ್ಟ್ ಕ್ಷಯ ಮುಂತಾದವು ಪ್ರಧಾನವಾಗಿ ಕಂಡು ಬರುತ್ತವೆ. 

	ಈ ಮೇಲೆ ಹೇಳಿರುವ ಪ್ರತಿಯೊಂದು ಚಟುವಟಿಕೆಯೂ ಜಟಿಲ ಹಾಗೂ ಸ್ವತಂತ್ರ ಆಗಿದೆಯಲ್ಲದೆ ಒಂದನ್ನೊಂದು ಅವಲಂಬಿಸಿರುವ ಭೌತಿಕ ಕ್ರಿಯೆಯೂ ಆಗಿದೆ. 

	ರಾಚನಿಕ ಭೂ ಆಕೃತಿ ವಿಜ್ಞಾನ (ಸ್ಟ್ರಕ್ಚರಲ್ ಜಿಯೊಮಾರ್ಫಾಲಜಿ): ಬಾಹ್ಯ ವೃದ್ಧಿಯ ಕ್ರಿಯಾತ್ಮಕ ಶಕ್ತಿಗಳ ಕ್ಷಯವನ್ನು ವಿರೋಧಿಸುವ ನಾನಾ ಬಗೆಯ ಶಿಲೆಗಳು ಭೂಮಿಯ ಮೇಲೆ ಕಂಡುಬರುತ್ತದೆ. ಭೂಮಿಯ ಮೇಲಿನ ರಚನಾ ವಿಧಾನಗಳು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಭಿನ್ನವಾಗಿರುತ್ತವೆ. ಇದರಲ್ಲಿ ಈ ಮುಂದಿನ ವ್ಯತ್ಯಾಸಗಳು ಗಮನಾರ್ಹ. 

	ಶಿಲೆಗಳ ವ್ಯತ್ಯಾಸ (ಪೆಟ್ರೊವೇರಿಯನ್ಸ್): ತಮ್ಮ ಗಡಸುತನದ ಆಧಾರದ ಮೇಲೆ ಶಿಲೆಗಳು ಕ್ಷಯ ನಿರೋಧ ಸಾಮಥ್ರ್ಯ ಪಡೆದಿವೆ. ಇವನ್ನು ಸುತ್ತುವರಿದಿರುವ ರಾಸಾಯನಿಕ ಮತ್ತು ಭೌತಿಕ ಕರ್ತೃಗಳೊಡನೆ ಇವುಗಳ ಪ್ರತಿಕ್ರಿಯೆಗಳು ಮತ್ತು ಇಂಥ ಕಾರ್ಯಚಟುವಟಿಕೆಗಳಿಗೆ ಬೇಕಾದ ಕಾಲಾವಧಿ ಮುಖ್ಯ. 

	ಭೂಮಿಯ ಮೇಲಾಗುವ ವ್ಯತ್ಯಾಸಗಳು (ಎಪಿರೊವೇರಿಯನ್ಸ್): ಭೂಮಿಯ ಮೇಲೆ ಮೇಲೆತ್ತಲ್ಪಡುವ ಭಾಗ, ಕುದಿಯುವ ಭಾಗ ಮತ್ತು ಈ ಪ್ರಕ್ರಿಯೆಗಳಿಗೆ ತಗಲುವ ಕಾಲ ಇವೆಲ್ಲವೂ ಭೂಮಿಯ ಮೇಲ್ಮೈಲಕ್ಷಣಗಳ ಬೆಳೆವಣಿಗೆಯನ್ನು ನಿರ್ಧರಿಸುತ್ತವೆ. ಉದಾಹರಣೆಗೆ ಎತ್ತರ ಪರ್ವತಗಳು. ಉನ್ನತ ಪ್ರದೇಶಗಳು (ಅಪ್‍ಲ್ಯಾಂಡ್ಸ್), ತಗ್ಗು ಪ್ರದೇಶಗಳು (ಲೋಲ್ಯಾಂಡ್ಸ್) ಮತ್ತು ಕುಸಿತದ ವಲಯ. ಭೂಮಿಯ ಮೇಲ್ಮೈಲಕ್ಷಣಗಳ ವ್ಯವಸ್ಥಿತ ಬೆಳೆವಣಿಗೆಗಳಿಗೆ ಈ ವ್ಯತ್ಯಾಸಗಳು ಬಲು ಮುಖ್ಯ. ಉದಾಹರಣೆಗೆ ಅಪಲೇಷಿಯನ್ ಪರ್ವತಗಳು, ಆಲ್ಪ್ಸ್ ಪರ್ವತಗಳು, ಹಾಟ್ರ್ಸ್ ಪರ್ವತಗಳು. ರೈನ್ ಸೀಳು ಕಣಿವೆ ಇಂಥಲ್ಲಿ ಈ ವ್ಯತ್ಯಾಸಗಳನ್ನು ಗುರುತಿಸಲಾಗಿದೆ. 

	ತಳಮಟ್ಟ (ಬೇಸ್ ಲೆವೆಲ್): ಸಾಮಾನ್ಯ ತಳಮಟ್ಟಕ್ಕಿಂತಲೂ ಎತ್ತರವಿರುವ ಭಾಗಕ್ಕೂ ನದಿಯ ಅಳತೆ ಹಾಗೂ ಅದರ ವಾಟ (ಗ್ರೇಡಿಯಂಟ್) ಮತ್ತು ನದೀಕಣಿವೆಯ ಅಗಲ ಇವುಗಳಿಗೂ ಸಂಬಂಧ ಉಂಟು. ವಿಶಾಲ ಕಣಿವೆಗಳಲ್ಲಿ ಹರಿಯುವ ದೊಡ್ಡ ನದಿಗಳು ಸಾಮಾನ್ಯವಾಗಿ ಮುಖ್ಯ ತಳಮಟ್ಟವನ್ನು ಸಮೀಪಿಸುವುದನ್ನು ಗುರುತಿಸಲಾಗಿದೆ. 

	ಸಮಗ್ರ ಉಬ್ಬು ಆಕೃತಿಯ ಪ್ರಭಾವ (ಟೋಟಲ್ ರಿಲೀಫ್ ಇನ್‍ಪ್ಲುಯನ್ಸ್). ಇದರಲ್ಲಿ ನಾಲ್ಕು ಬಗೆಗಳು:

	1 ಇದು ನಗ್ನೀಕರಣ (ಡೆನ್ಯುಡೇಟಿವ್) ಕ್ರಿಯೆಯಾಗಿರಬಹುದು. ಅಂದರೆ, ಯಾವುದಾದರೂ ಇಳಿಜಾರು ಭಾಗ ಅದರ ಕೆಳಭಾಗಕ್ಕಿಂತಲೂ ಹೆಚ್ಚು ಕಡಿದಾಗಿದ್ದರೆ ಆಭಾಗ ತನ್ನ ಕೆಳಭಾಗದಲ್ಲಿ ನಡೆಯುವ ಕೃಶೀಕರಣ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. 

	2 ಉಜ್ಜುವಿಕೆ (ಅಬ್ರೇಸಿಂಗ್): ಹಿಮನದಿಗಳಿರುವ ಎತ್ತರ ಪರ್ವತಗಳು ದೊಡ್ಡ ನದಿಗಳನ್ನೂ ಜೊತೆಗೆ ದೊಡ್ಡ ಮೊತ್ತದಲ್ಲಿ ದಪ್ಪ ಮರಳನ್ನೂ ಒದಗಿಸುತ್ತವೆ. ಅಂಥ ನದಿಗಳು ಕಣಿವೆಯ ಅಗಲ ಮತ್ತು ವಾಟದ ಪ್ರಮಾಣ ಅನುಸರಿಸಿ ಕೆಳಮುಖವಾಗಿ ಹರಿಯುತ್ತವೆ. 

	3 ದೂರದ ವಾಯುಗುಣದ ಪ್ರಭಾವ (ಡಿಸ್ಟೆಂಟ್ ಕ್ಲೈಮ್ಯಾಟಿಕ್ ಇನ್‍ಫ್ಲುಯೆನ್ಸ್) : ದೀರ್ಘವಾಗಿ ಚಾಚಿಕೊಂಡಿದ್ದು ಹೆಚ್ಚು ಮಳೆಯಾಗುವ ಪರ್ವತ ಶ್ರೇಣಿಗಳಿಂದ ಹರಿದು ಬರುವ ನದಿಗಳು ಪ್ರಮುಖ ವಾಯುಗುಣದ ಸರಹದ್ದುಗಳನ್ನು ಸಹ ದಾಟಿ ದೂರದ ಮರುಭೂಮಿಗಳಿಗೂ ಪ್ರವೇಶಿಸುತ್ತವೆ. ಉದಾಹರಣೆಗೆ ನೈಲ್ ನದಿ. 

	4 ಮಾನವ ಪ್ರಭಾವ: ಭೂಮಿಯ ಮೇಲೆ ನಡೆಯುತ್ತಿರುವ ಎಲ್ಲ ಬಗೆಯ ನೈಸರ್ಗಿಕ ಪ್ರಕ್ರಿಯೆಗಳಲ್ಲಿ ಮಾನವನ ಪ್ರಭಾವ ಮುಖ್ಯ. ಉದಾಹರಣೆಗೆ ನದಿಗಳ ನಿಯಂತ್ರಣ. ಅರಣ್ಯಗಳ ನಾಶ, ಮಣ್ಣಿನಾಶ ಮುಂತಾದವು. 

	ವಾಯುಗುಣ ಭೂಆಕೃತಿವಿಜ್ಞಾನ (ಕ್ಲೈಮ್ಯಾಟಿಕ್ ಜಿಯೊಮಾರ್ಫಾಲಜಿ): ವಾಯುಗುಣದಲ್ಲಿ ಆಗುವ ವ್ಯತ್ಯಾಸಗಳು (ವೇರಿಯನ್ಸ್) ಭೂಮಿಯ ಮೇಲೆ ನಡೆಯುವ ಎಲ್ಲ ಬಗೆಯ ಕ್ರಿಯಾತ್ಮಕ ಚಟುವಟಿಕೆಗಳನ್ನು ನಿಯಂತ್ರಿಸುತ್ತವೆ. ವಾಯುಗುಣದ ಪ್ರತಿಯೊಂದು ವಲಯಕ್ಕೂ ನಿರ್ದಿಷ್ಟ ಚಟುವಟಿಕೆ ಇದ್ದು ಅದು ಭೂಮಿಯ ಮೇಲಿನ ರಚನಾ ವಿನ್ಯಾಸಗಳನ್ನು ನಿಯಂತ್ರಿಸುತ್ತದೆ. 

	ಭೂಮಿಯ ಮೇಲಿನ ಭಾಗವನ್ನು ಐದು ವಾಯುಗುಣ ಆಕೃತಿ ರಚನಾವಲಯಗಳಾಗಿ (ಕ್ಲೈಮೆಟೊ-ಮಾರ್ಫಲಾಜಿಕಲ್ ಜೆóೂೀನ್ಸ್) ವಿಂಗಡಿಸಲಾಗಿದೆ:

	1 ಹಿಮನದಿಗಳಿಂದಾದ ಕ್ಷಯಕ್ಕೆ ಒಳಗಾದ ಪ್ರದೇಶಗಳು, ಅಂದರೆ ಧ್ರುವ ¥್ರದೇಶÀಗಳು ಮತ್ತು ಪರ್ವತ ಶ್ರೇಣಿಗಳು. 

	2 ಸ್ಪಷ್ಟ ಕಣಿವೆಗಳು ರಚನೆಯಾಗುವ ವಲಯ ಅಂದರೆ ಹೆಚ್ಚು ಕಡಿಮೆ ಧ್ರುವಪ್ರದೇಶಗಳಂಥವೇ ಆದ ಪ್ರದೇಶಗಳು. 

	3 ಕಣಿವೆ ರಚನೆಯಾಗುವ ಉಷ್ಣವಲಯ. ಇದು ಅಕ್ಷಾಂಶದ ಮಧ್ಯದÀಲ್ಲಿರುವ ಬಹುತೇಕ ಪ್ರದೇಶಗಳನ್ನು ಒಳಗೊಂಡಿದೆ. ಅತಿಸೌಮ್ಯ ಚಟುವಟಿಕೆಯ ಪ್ರಕ್ರಿಯೆಗಳನ್ನು ಈ ವಲಯದಲ್ಲಿ ಕಾಣಬಹುದು. ಹಿಮಯುಗದಲ್ಲಾದ ಅನೇಕ ಗುರುತುಗಳನ್ನು ಈ ವಲಯದಲ್ಲಿ ಕಾಣಬಹುದು. ಹಿಮಯುಗದಲ್ಲಾದ ಅನೇಕ ಗುರುತುಗಳ ಅವಶೇಷಗಳು ಇಲ್ಲಿ ತೀವ್ರವಾಗಿ ಅಚ್ಚೊತ್ತಿವೆ. 

	4 ಪರ್ವತಪಾದ ಮತ್ತು ಕಣಿವೆ ರಚನೆಗಳಾಗುವ (ಪೈಡ್‍ಮಾಂಟ್ ಅಂಡ್ ವ್ಯಾಲಿ ಫಾರ್ಮೇಷನ್) ಬಹುತೇಕ ಉಷ್ಣವಲಯ. 

	5 ಬಹುತೇಕ ಸಮತಟ್ಟಿನ ಪ್ರದೇಶ ರಚನೆಯಾಗುವ (ಟ್ರೌಪಿಕಲ್ ಜೋನ್ಸ್) ವಾಯುಗುಣ ಉತ್ಪತ್ತಿ ಭೂಆಕೃತಿವಿಜ್ಞಾನ (ಕ್ಲೈಮೆಟೊ-ಜೆನೆಟಿಕ್ ಜಿಯಾ ಮಾರ್ಫಾಲಜಿ), ಈ ವಿಭಾಗ ಈತನಕ ವರ್ಣಿಸಿದ ವಿವಿಧ ಪಕ್ರಿಯೆ ಮತ್ತು ರಚನೆಗಳಿಗೆ ಕಾಲವನ್ನು ನಿಗದಿಮಾಡುವುದನ್ನು ಕುರಿತಂತೆ ಇದೆ. ಕಳೆದ 10 ದಶಲಕ್ಷ ವರ್ಷಗಳಿಂದಲೂ ವಾಯುಗುಣದಲ್ಲಿ ಕಂಡುಬಂದ ಬದಲಾವಣೆಗಳ ಸಲುವಾಗಿ ಇಂದು ಭೂಮಿಯ ಮೇಲ್ಮೈಯಲ್ಲಿಯ ಸವಗ್ರ ರಚನೆಯಲ್ಲಿ ಹಿಂದಿನಿಂದಲೂ ರೂಪುಗೊಂಡಿರುವಂಥ ಅನೇಕ ಭೂಆಕೃತಿಗಳನ್ನು ಗುರುತಿಸಬಹುದು. ಇಂಥವನ್ನು ಸಾಕಷ್ಟು ಕರಾರುವಕ್ಕಾಗಿ ಗುರುತಿಸುವುದೇ ವಾಯುಗುಣಉತ್ಪತ್ತಿಭೂಆಕೃತಿ ವಿಜ್ಞಾನದ ಗುರಿ. 

	ಇಂದಿನ ಧ್ರುವಪ್ರದೇಶಗಳು ಮತ್ತು ಮಧ್ಯ ಅಕ್ಷಾಂಶ ಭಾಗಗಳಲ್ಲಿ ಬಲು ಪುರಾತನ ಕಾಲದಿಂದಲೂ ಭೂಮಿಯ ಮೇಲ್ಮೈಯಲ್ಲಿ ರೂಪುಗೊಂಡ ಉಬ್ಬು ಶಿಲ್ಪಗಳನ್ನೂ ಅವುಗಳಲ್ಲಿ ಆಗಿರುವ ವ್ಯತ್ಯಾಸಗಳನ್ನೂ ಗುರುತಿಸಲಾಗಿದೆ. ಇತ್ತೀಚಿನ ಭೂವೈಜ್ಞಾನಿಕ ಭೂತಕಾಲದಲ್ಲಿ (ರೀಸೆಂಟ್ ಜಿಯೊಲಾಜಿಕಲ್ ಪಾಸ್ಟ್) ಆ ಭಾಗಗಳಲ್ಲಿಯ ವಾಯುಗುಣದಲ್ಲಿ ಪರಿಣಾಮಕಾರಿ ಬದಲಾವಣೆಗಳಾದುದು ಈ ವ್ಯತ್ಯಾಸಗಳಿಗೆ ಕಾರಣ ಎನ್ನಲಾಗಿದೆ. 

	ಉಬ್ಬು ಆಕೃತಿಗಳ ರಚನೆಯ ಸಂಬಂಧದಲ್ಲಿ ಈ ಕೆಳಗಿನವನ್ನು ಗುರುತಿಸಲಾಗಿದೆ:

	1 ಉಬ್ಬುಗಳುಳ್ಳ ಮಯೊಸೀನ್ ಅಥವಾ ಪ್ಲಿಯೊಸೀನ್ ಕಾಲದ ಮೇಲ್ಮೈಗಳು. 

	2 ಪ್ಲೀಸ್ಟೊsಸೀನ್ ಕಾಲದ (ಹಿಮಯುಗದ) ಅತ್ಯಂತ ಆದಿಭಾಗದ ಆಳವಲ್ಲದ ಕಣಿವೆಗಳ ಉಳಿದ ತಳಭಾಗಗಳಂ, ಮಟ್ಟಪ್ರದೇಶಗಳು. 

	3 ಅತ್ಯಂತ ಶೀತವಾಯುಗುಣವಿದ್ದ ಹಿಮಯುಗದಲ್ಲಿ (ಪ್ಲೀಸ್ಟೊಸೀನ್) ತೀರ ಆಳವಾಗಿ ಕೊರೆಯಲ್ಪಟ್ಟ ಮಟ್ಟಪ್ರದೇಶಗಳಿರುವ ಕಣಿವೆಗಳು, ಹಿಮಾವೃತ ಮಣ್ಣಿನ ಪದರ ಮತ್ತು ದೂಳು (ಲೋಯಸ್) ಪದರಗಳ ಅವಶೇಷ. 

	4 ಹಿಮಯುಗದ ಮತ್ತು ನವೀನ ಭೂಯುಗದ (ಹೋಲೊಸೀನ್) ಉಬ್ಬು ಶಿಲ್ಪಗಳು. 

	5 ನವೀನ ಭೂಯುಗದ ಇತಿಹಾಸದಲ್ಲಿ ಮಾನವ ಬೀರಿದ ಪ್ರಭಾವವನ್ನು ಸೂಚಿಸುವ ವೈಲಕ್ಷಣಗಳು. 

	ಪಾಶ್ರ್ವೋಷ್ಣವಲಯಗಳಲ್ಲಿ ಒಂದೇ ರೀತಿಯ ವಾಯುಗುಣದ ಪ್ರಭಾವದಿಂದ ಉತ್ಪತ್ತಿಯಾದ, ಮತ್ತು ತೊಡಕಿನಿಂದಕೂಡಿದ ಉಬ್ಬುಶಿಲ್ಪಗಳನ್ನು ಕಾಣಬಹುದು. ಇಂದಿನ ಸಮತಲ ಪ್ರದೇಶಗಳು ರಚನೆಯಾಗುವ ಉಷ್ಣವಲಯದಲ್ಲಿ ಇವು ಪ್ರತ್ಯೇಕವಾಗಿದೆ. ಮಧ್ಯ ಅಕ್ಷಾಂಶ ಪ್ರದೇಶಗಳಲ್ಲಿ ಇಂದಿನ ಪ್ರಕ್ರಿಯೆಗಳು ಕೇವಲ ಸುಮಾರು 10,000 ವರ್ಷಗಳಿಂದ ನಡೆದುಬರುತ್ತಿವೆ. ಆದ್ದರಿಂದ ಭೂಮಿಯ ಮೇಲಿನ ಒಟ್ಟು ಉಬ್ಬುಶಿಲ್ಪದ ಕೇವಲ 5% ರಷ್ಟನ್ನು ಮಾತ್ರ ಈ ಪ್ರಕ್ರಿಯೆಗಳು ನಿರ್ಮಿಸಿವೆ. ಉಷ್ಣವಲಯದಲ್ಲಿಯ ನದಿಗಳಿಂದಾಗುವ ಸವೆತ ಬಲುಮುಖ್ಯ. ಹಲವಾರು ದಶಲಕ್ಷ ವರ್ಷಗಳಿಂದಲೂ ಈ ಕಾರ್ಯದಲ್ಲಿ ಆಗಿರುವ ಬದಲಾವಣೆಗಳು ಅಲ್ಪ. ಈ ಕಾರ್ಯ ತೃತೀಯ ಭೂಯುಗದ ಕೊನೆಯಲ್ಲಿ (ಪ್ಲಿಯೊಸೀನ್) ಪ್ರಾರಂಭವಾಗಿ, ಚತುರ್ಥ ಭೂಯುಗದ ಪೂರ್ತಿ ನಡೆದು ಇಂದಿನ ತನಕವೂ ಮುಂದುವರಿದುಕೊಂಡು ಬಂದಿದೆ. ಆದ್ದರಿಂದ ಈಗಿನ ಪ್ರದೇಶಗಳಲ್ಲಿ ಕಂಡು ಬರುವ ಬಹುಪಾಲಿನ ಉಬ್ಬುಶಿಲ್ಪಗಳು ಇನ್ನೂ ಚಟುವಟಿಕೆಯಿಂದೊಡಗೂಡಿರುವ ಪ್ರಕ್ರಿಯೆಗಳಿಂದ ರಚಿತವಾಗಿರುವಂಥವು.	
	(ಎಂ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ